Thursday, March 18, 2010

ನನ್ನನ್ನು ಬಹುವಾಗಿ ಕಾಡಿದ ಕಥೆ

ಸಮುದ್ರತೀರದಲ್ಲಿ ಒಂದು ಹಳ್ಳಿ, ಆ ಹಳ್ಳಿಯಲ್ಲೊಂದು ಪುಟ್ಟ ಗುಡಿಸಲು. ಅದರಲ್ಲಿ ವಯಸ್ಸಾದ ತಾಯಿಯೊಡನೆ ಒಬ್ಬ ಸ್ಪುರದ್ರೂಪಿ ಯುವಕ ವಾಸವಿದ್ದ. ಹೊಟ್ಟೇಪಾಡಿಗೆ ಸಮುದ್ರದಲ್ಲಿ ಮೀನು ಹಿಡಿಯುತ್ತಿದ್ದ.

ಒಮ್ಮೆ ಮೀನು ಹಿಡಿಯುವಾಗ ಭಾರೀ ಅಲೆಗಳೆದ್ದು ಅವನು ನೀರಿನಲ್ಲಿ ಮುಳುಗಿದ. ಪಾತಾಳಲೋಕದ ಜನರು ಅವನನ್ನು ರಕ್ಷಿಸಿ ತಮ್ಮ ಲೋಕಕ್ಕೆ ಕೊಂಡೊಯ್ದರು. ಅಲ್ಲಿನ ರಾಜನ ಮಗಳಿಗೆ ಇವನ ಬಗ್ಗೆ ಮೋಹವಾಯ್ತು. ಅವಳ ತಂದೆಯ ಒಪ್ಪಿಗೆ ಸಿಕ್ಕಿ ಯುವಕನೊಡನೆ ಮದುವೆಯೂ ಆಯ್ತು.

ಬಹಳ ದಿನಗಳ ನಂತರ ಆ ಯುವಕನಿಗೆ ತನ್ನ ತಾಯಿಯ ನೆನಪಾಯ್ತು. ಒಮ್ಮೆ ಹೋಗಿ ನೋಡಿ ಬರುತ್ತೇನೆಂದ. ರಾಜಕುಮಾರಿ ಅವನ ಕೈಗೆ ಉಂಗುರ ತೊಡಿಸಿ ಭೂಲೋಕಕ್ಕೆ ಹೋದಾಗ ಯಾವ ಕಾರಣಕ್ಕೂ ಆ ಉಂಗುರವನ್ನು ಕೈನಿಂದ ತೆಗೆಯಬಾರದೆಂದು ಭಾಷೆ ಪಡೆದು ಬೇಗನೇ ಹಿಂದಿರುಗಬೇಕೆಂದು ಹೇಳಿ ಕಳುಹಿಸಿಕೊಟ್ಟಳು.

ಯುವಕ ತನ್ನೂರನ್ನು ಗುರುತು ಹಿಡಿಯದಾದ. ಅಲ್ಲಿ ಗುಡಿಸಲಿದ್ದ ಜಾಗದಲ್ಲಿ ದೊಡ್ಡ ಮನೆಯೊಂದನ್ನು ಕಟ್ಟಿದ್ದರು. ಪರಿಚಯದವರು, ಸ್ನೇಹಿತರು, ವಯಸ್ಸಾದ ತಾಯಿ ಯಾರೂ ಇರಲಿಲ್ಲ. ಆತ ಎಲ್ಲರೊಡನೆ ತಾಯಿಯ ಬಗ್ಗೆ ವಿಚಾರಿಸಿದ. ಆದರೆ ಆಕೆ ಸತ್ತು ಶತಮಾನಗಳೇ ಕಳೆದಿತ್ತು. ಯಾರಿಗೂ ಗುರುತು ಸಿಗಲಿಲ್ಲ. ಯುವಕ ಅಳತೊಡಗಿದ.

ಆ ಯುವಕನ ವ್ಯರ್ಥ ಪ್ರಲಾಪವನ್ನು ದೂರದಿಂದ ಗಮನಿಸುತ್ತಿದ್ದ ಪುಟ್ಟ ಹುಡುಗಿಯೊಬ್ಬಳನ್ನು ಅವನ ಕೈಲಿದ್ದ ಉಂಗುರ ಆಕರ್ಷಿಸಿತು. ಅವಳು ಅವನ ಬಳಿಗೆ ಬಂದು: ನಾನು ನಿನ್ನನ್ನು ಗುರುತಿಸಿದ್ದೇನೆಂದೂ, ನಿನ್ನ ತಾಯಿ ಸತ್ತು ವರುಷಗಳೇ ಆಯಿತೆಂದೂ ತಾನು ಅವನ ನೆಂಟರ ಹುಡುಗಿಯೆಂದೂ ತಿಳಿಸಿದಳು. ತನಗೆ ಬಡತನವಿರುವುದರಿಂದ ಆ ಉಂಗುರ ಕೊಟ್ಟರೆ ಅದನ್ನು ಮಾರಿ ಅಕ್ಕಿ ತರುತ್ತೇನೆಂದೂ ಬೇಡಿದಳು.

ಈಗಾಗಲೇ ಬೇಸರದಲ್ಲಿದ್ದ ಯುವಕ ಉಂಗುರ ಕಳಚಿ ಹುಡುಗಿಯ ಕೈಲಿಟ್ಟ. ಹುಡುಗಿ ತಡಮಾಡದೇ ಓಡತೊಡಗಿದಳು. ನೋಡ ನೋಡುತ್ತಿದ್ದಂತೆ ಆ ಯುವಕ ಹಣ್ಣು ಹಣ್ಣು ಮುದುಕನಾದ. ಉಂಗುರದ ಪ್ರಭಾವ ಹೋಗುತ್ತಿದ್ದಂತೆ ಅವನು ಎಲ್ಲ ಮನುಷ್ಯರಂತೆ ಮುಪ್ಪಾದ. ಕಷ್ಟ ಪಟ್ಟು ಕಿರುಚಿದ "ಏ ಹುಡುಗೀ..." ಅಷ್ಟರಲ್ಲಾಗಲೇ ಉಂಗುರ ಪಡೆದ ಹುಡುಗಿ ತನ್ನ ಮೋಸ ಫಲಿಸಿದ ಬಗ್ಗೆ ಸಂತೋಷ ಪಡುತ್ತಾ ಬಹುದೂರ ಓಡಿದ್ದಳು. ಮುದುಕನಾಗಿದ್ದ ಯುವಕ ಅಲ್ಲೇ ಸಾವನ್ನಪ್ಪಿದ್ದ....

ಮನ ಕಲಕುವ ಕಥೆ ಅಲ್ವಾ ? ಇಲ್ಲಿ ಯಾರು ಯಾರಿಗೆ ಅನ್ಯಾಯ ಮಾಡಿದರು ?

ಅವನನ್ನು ತನ್ನ ಬಳಿಯೇ ಉಳಿಸಿಕೊಂಡದ್ದು ರಾಜಕುಮಾರಿಯ ಸ್ವಾರ್ಥ. ಅಮ್ಮನನ್ನು ಮರೆತಿದ್ದು ಯುವಕನ ಸ್ವಾರ್ಥ. ಪರಿಚಯವಿಲ್ಲದ ಯುವಕನಿಗೆ ಕಥೆ ಕಟ್ಟಿ ಉಂಗುರ ಪಡೆದದ್ದು ಹುಡುಗಿಯ ಸ್ವಾರ್ಥ.

ಅಷ್ಟು ಚಿಕ್ಕ ಹುಡುಗಿಗೆ ಮೋಸಮಾಡುವ ಯೋಚನೆ ಬಂದದ್ದು Necessity. ಅವಳ ಬಡತನ ಅವಳಿಂದ ಆ ಕೆಲಸ ಮಾಡಿಸಿತು. ಇನ್ನು ರಾಜಕುಮಾರಿಯದ್ದು Conditional Love. ನನ್ನೊಡನೆ ನೀನಿರುವವರೆಗೂ ಯುವಕನಾಗಿಯೇ ಇರು ಎಂಬಾಸೆ.

ಯಾರಾದರೂ ನಿಮ್ಮ ಬಳಿ ಸಹಾಯ ಪಡೆಯಲು ಬಂದಾಗ ಅವರನ್ನು ಪುಟ್ಟ ಹುಡುಗಿಯ ಸ್ಥಾನದಲ್ಲಿಟ್ಟು ನಿಮ್ಮನ್ನು Innocent ಯುವಕನ ಸ್ಥಾನದಲ್ಲಿಟ್ಟು ನೋಡಿ. ಕೆಲಸವಾಗುತ್ತಿದ್ದಂತೆ ಅವರು ಪುಟ್ಟ ಹುಡುಗಿಯಂತೆ ಓಡಿ ಮರೆಯಾಗುತ್ತಾರೆ. ನೀವು ಆ ಯುವಕನಂತೆ ಪಶ್ಚಾತ್ತಾಪ ಪಟ್ಟಿರುತ್ತೀರಿ.

ನಿಮ್ಮದು ಯಾರಬಗ್ಗೆಯಾದರೂ Conditional Love ಆಗಿದ್ದರೆ ಆ ಯುವಕನಂತೆ ಉಂಗುರ ಕೊಟ್ಟುಬಿಡಬೇಡಿ!!! ನನಗಂತೂ Sales person ಗಳನ್ನು ನೋಡಿದಾಗ, Insurence agent ಗಳನ್ನ ನೋಡಿದಾಗ, ಭಿಕ್ಷುಕರನ್ನು ನೋಡಿದಾಗ, ನೀ ನನಗೆ ಒಳ್ಳೇದುಮಾಡಿದರೆ ನಾ ನಿನಗೆ ಒಳ್ಳೆಯವನು ಎಂಬ ಮನಸ್ಥಿತಿಯಲ್ಲಿ ಸಹಾಯ ಕೋರಿ ಬರುವ ಪರಿಚಯದವರನ್ನು ನೋಡಿದಾಗ ಆ ಯುವಕ ನೆನಪಿಗೆ ಬರುತ್ತಾನೆ.

ನಾನು ಮನಸ್ಸಿನಲ್ಲೇ ಹೇಳಿಕೊಳ್ಳುತ್ತೇನೆ- ಉಂಗುರದ ಅವಶ್ಯಕತೆ ನನಗೇ ಹೆಚ್ಚು. ನಾನು ಉಂಗುರ ಕೊಡೋಲ್ಲ!!!

ನಿಮ್ಮ ಬಳಿ ಆ ಪುಟ್ಟ ಹುಡುಗಿ ಎಷ್ಟುಬಾರಿ ಯಾರ ಯಾರ ರೂಪದಲ್ಲಿ ಉಂಗುರ ಕೇಳುತ್ತಾ ಬಂದಿದ್ದಾಳೆ ಅಂತ ಪಟ್ಟಿಮಾಡಿ ನೋಡಿ, ಮುಂದೆ ಮೋಸಹೋಗುವ ಸಂಧರ್ಭ ಬರಲಾರದು!!!

No comments:

Post a Comment